ಕನ್ನಡದ ಉದ್ಧಾರ = ಕನ್ನಡನಾಡಿನ ಉದ್ಧಾರ??
ನನ್ನ ತಿಳುವಳಿಕೆಯ ಪ್ರಕಾರ , ಒಂದು ನಾಡು ಉದ್ಧಾರವಾದರೆ ಆ ನಾಡಿನ ಜನತೆಯೂ ಉದ್ಧಾರವಾಗುತ್ತದೆ. ಇಲ್ಲಿ ಉದ್ಧಾರ ಅಂದರೆ ಆರ್ಥಿಕ ಸ್ಥಿತಿಗತಿಗಳ ಸುಧಾರಣೆ, ಜೀವನಮಟ್ಟದ ಹೆಚ್ಚಳ, ನೆಮ್ಮದಿಯ ಜೀವನ ಇತ್ಯಾದಿ ಅರ್ಥದಲ್ಲಿ ಬಳಸಿದ್ದೇನೆ.ಆದರೆ ಈಚೆಗಿನ ಕೆಲ ಬೆಳವಣಿಗೆಗಳು ನ್ನ ಈ ನಂಬಿಕೆಯನ್ನು ಅಲ್ಲಾಡಿಸುತ್ತಿವೆ.
ಬೆಂಗಳೂರು ಕಳೆದ ಎರಡು ದಶಕಗಳಲ್ಲಿ ಐಟಿ ಕ್ಷೇತ್ರದಲ್ಲಿ ಬಹಳಷ್ಟು ಹೆಸರುಮಾಡಿದೆ. ಸಹಸ್ರಾರು ಕೋಟಿ ರೂಪಾಯಿಗಳ ವಿದೇಶೀ ವಿನಿಮಯ ದೊರಕಿಸಿಕೊಡುತ್ತಿದೆ. ಲಕ್ಷಾಂತರ ಜನಕ್ಕೆ ಉದ್ಯೋಗ ದೊರಕಿದೆ. ಬಹಳ ಸಂತೋಷದ ವಿಚಾರ. ನಮ್ಮ ಕನ್ನಡನಾಡಿನ ರಾಜಧಾನಿಗೆ ಈ ಪಟ್ಟ ದೊರಕಿರುವುದು ಯಾವ ಕನ್ನಡಿಗನೂ ಹೆಮ್ಮೆ ಪಡಬೇಕಾದ ವಿಷಯವೇ.
ಮೂವತ್ತು ವರ್ಷಗಳ ನಂತರ ಕಳೆದ ವರ್ಷ ಬೆಂಗಳೂರಿಗೆ ಭೇಟಿಕೊಟ್ಟಾಗ ದಿಗ್ಭ್ರಮೆಯಾಯಿತು. ಸಿಟಿ ಯದ್ವಾತದ್ವಾ ಬೆಳೆದಿದೆ ಎಂದಲ್ಲ. ನಮ್ಮ ಏರುತ್ತಿರುವ ಜನಸಂಖ್ಯೆಯಿಂದ ಯಾವುದೇ ನಗರ ಬೆಳೆಯುವುದು ಸಹಜವೇ. ಆದರೆ ಬೆಂಗಳೂರಿನ ಐಡೆಂಟಿಟಿಯೇ ಬದಲಾಗಿಬಿಟ್ಟಿದೆ. ಮೊದಲೆಲ್ಲಾ ಕನ್ನಡ ಪ್ರದೇಶಗಳು ಹೋಗಲಿ , ಕಂಟೋನ್ಮೆಂಟಿನಲ್ಲೂ ಕನ್ನಡ ಅಪರೂಪವಾಗಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ತಮಿಳು , ತೆಲುಗುಗಳ ಪ್ರಾಬಲ್ಯ ಇದ್ದು ನಿಜ. ಆದರೆ ಹಿಂದಿ ಕೇಳಿ ಬರುತ್ತಿರಲಿಲ್ಲ.
ಇವತ್ತು ಬೆಂಗಳೂರಿನಲ್ಲಿ ಕನ್ನಡ ಅಪರೂಪವಾಗಿದೆ. ದೊಡ್ಡದೊಡ್ಡ ಹೋಟೆಲುಗಳು, ಪಬ್ಗಳು, ಮಾಲ್ ಗಳು,ಅಪಾರ್ಟ್ಮೆಂಟುಗಳಲ್ಲಿ ಹಳೆಯ ಬೆಂಗಳೂರು ಕಳೆದೇ ಹೋಗಿದೆ. ಎಲ್ಲೆಲ್ಲಿಯೂ ಹಣದ, ಆಧುನಿಕತೆಯ, ಪಾಶ್ಚಿಮಾತ್ಯ ಸಂಸ್ಕೃತಿಯ ಅಟ್ಟಹಾಸ ಕಾಣಬರುತ್ತದೆ.
ಇದೆಲ್ಲ ವೈಭವದಲ್ಲಿ ಕನ್ನಡಿಗರಿಗೆ ದಕ್ಕಿದ್ದೇನು? ತಮಿಳರು, ತೆಲುಗರು, ಮಲೆಯಾಳಿಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಉತ್ತರಭಾರತದ ವ್ಯಾಪಾರೀ ವರ್ಗ ಕಾಲಿಟ್ಟಿದೆ. ಬೆಂಗಳೂರಿನ ಸೈಟುಗಳ ಬೆಲೆ ಗಗನಕ್ಕೇರಿದೆ. ಐಟಿ ಹಾಗೂ ಅದಕ್ಕೆ ಸಂಬಂಧಪಟ್ಟ ಉದ್ಯಮಗಳಲ್ಲಿ ಕನ್ನಡಿಗರ ಸಂಖ್ಯೆಯೆಷ್ಟು? ಐಟಿ ಹಾಗೂ ಅದಕ್ಕೆ ಸಂಬಂಧಪಟ್ಟ ಉದ್ಯಮಗಳ ಹೊರತಾದ ಬಾಕೀ ನಾಗರೀಕರ ಜೀವನ ಏರುತ್ತಿರುವ ಬೆಲೆಗಳಿಂದ, ಹೆಚ್ಚುತ್ತಿರುವ ರಸ್ತೆ ಜಾಮುಗಳಿಂದ, ಇತ್ಯಾದಿಗಳಿಂದ ದುರ್ಭರವಾಗಿದೆ.
ಈಗ ಹೇಳಿ , ಬೆಂಗಳೂರು ಉದ್ಧಾರವಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಿತು. ಆದರೆ, ಬೆಂಗಳೂರಿಗರು, ಕನ್ನಡಿಗರು ಉದ್ಧಾರವಾದರೆ?